ಕೃಷಿಯ ಅಸ್ಥಿರತೆ 

ಕೃಷಿ ವ್ಯವಸ್ಥೆಯ ಒಂದು ಮುಖ್ಯ ಸಮಸ್ಯೆಯೆಂದರೆ ಅದರಲ್ಲಿ ಪದೇ ಪದೇ ಸಂಭವಿಸುವ ವಿಕ್ಷೋಭೆಗಳು, ವಿಕೋಪ (ಡಿಸ್ಟರ್ಬೆನ್ಸಸ್). ಕೈಗಾರಿಕಾಕ್ಷೇತ್ರದಲ್ಲೂ ಇವು ಸಂಭವಿಸುವುದಾದರೂ ಕೃಷಿಯಲ್ಲಿ ಇವು ಬಹಳ ತೀವ್ರವಾಗಿರುತ್ತವೆ. ಕೃಷಿ ವಸ್ತುಗಳ ಉತ್ಪಾದನೆ ಮತ್ತು ವಿಕ್ರಯಗಳಲ್ಲಿ ಶ್ರಾಯೀಣವಾಗಿ, ವಾರ್ಷಿಕವಾಗಿ ಮತ್ತು ಚಕ್ರೀಯವಾಗಿ ಸಂಭವಿಸುವ ಏರಿಳಿತಗಳಿಂದಾಗಿ ಅವುಗಳ ಬೆಲೆಗಳ ಮೇಲೆ ತೀವ್ರ ಪರಿಣಾಮಗಳುಂಟಾಗುತ್ತವೆ. ಕೃಷಿ ವಸ್ತುಗಳಿಗಾಗಿ ಅನುಭೋಗಿಗಳಿಂದ ಬರುವ ಬೇಡಿಕೆಯಲ್ಲಿ ಸಾಮಾನ್ಯವಾಗಿ ಹೆಚ್ಚು ವ್ಯತ್ಯಾಸಗಳಿರುವುದಿಲ್ಲ. ಉತ್ಪಾದನೆಯಲ್ಲಿ ಏರಿಳಿತಗಳು ಸಂಭವಿಸಿದಾಗ ಚಿಲ್ಲರೆ ಮಾರಾಟ ಬೆಲೆಗಳಲ್ಲಿ ಬಲು ಹೆಚ್ಚಿನ ವ್ಯತ್ಯಾಸಗಳು ಸಂಭವಿಸುವುದಕ್ಕೆ ಸಮರ್ಪಕ ಬೇಡಿಕೆಯೆ ಅಪುಟಿತತೆಯೇ ಕಾರಣ. ಕೃಷಿ ವಸ್ತುಗಳಿಗೆ ಬೇಡಿಕೆಯಲ್ಲಿ ವ್ಯತ್ಯಾಸವಿಲ್ಲದಿರುವುದಷ್ಟೇ ಅಲ್ಲದೆ ಉತ್ಪಾದಕನಿಗೂ ಅನುಭೋಗಿಗೂ ನಡುವೆ ಬರುವ ಮಧ್ಯವರ್ತಿಗಳು ಕೃಷಿ ಉತ್ಪನ್ನದ ಪ್ರತಿಯೊಂದು ಘಟಕದ ಮೇಲೂ ವಸೂಲಿ ಮಾಡುವ ಹಣದಲ್ಲಿ ಕೂಡ ಸಾಮಾನ್ಯವಾಗಿ ಯಾವ ವ್ಯತ್ಯಾಸವೂ ಆಗುವುದಿಲ್ಲ. ಈ ಕಾರಣದಿಂದಾಗಿ, ಉತ್ಪಾದಕನಿಗೆ ದೊರಕುವ ಬೆಲೆಯ ಮೇಲೂ ಅನುಭೋಗಿ ಕೊಡಬೇಕಾಗಿ ಬರುವ ಬೆಲೆಯ ಮೇಲೂ ತೀವ್ರ ಪರಿಣಾಮಗಳುಂಟಾಗುತ್ತವೆ. ಒಂದೊಂದು ಉತ್ಪನ್ನದ ಬೆಲೆ ಮತ್ತು ವರಮಾನಗಳು ಋತುಧರ್ಮಗಳಿಗೂ ವಾರ್ಷಿಕ ಸ್ಥಿತಿಗಳಿಗೂ ಅನುಗುಣವಾಗಿ ಏರಿಳಿಯುತ್ತಿರುವುದು ಮಾತ್ರವೇ ಅಲ್ಲ; ಹಲವು ವರ್ಷಗಳಿಗೊಮ್ಮೆ ಸಂಭವಿಸುವ ಚಕ್ರೀಯ ಏರಿಳಿತಗಳಿಂದಾಗಿ ಇಡೀ ಕೃಷಿ ವ್ಯವಸ್ಥೆಯಲ್ಲಿಯ ಬೆಲೆಗಳು ಮತ್ತು ಅಭ್ಯುದಯದ ಮೇಲೆ ತೀವ್ರ ಪರಿಣಾಮಗಳುಂಟಾಗುತ್ತಿರುತ್ತವೆ.

	ಮಾರಾಟ ವೆಚ್ಚಗಳು ಮತ್ತು ಬೆಲೆಗಳು: ಕೃಷಿ ವ್ಯವಸ್ಥೆಯ ಲಕ್ಷಣ್ಯಗಳಲ್ಲಿ ಅದರ ಮಾರಾಟ ವೆಚ್ಚವು ಪ್ರಮಯಖವಾದದ್ದು. ಒಂದು ಕೃಷಿ ಉತ್ಪನ್ನದ ಚಿಲ್ಲರೆ ಮಾರಾಟ ಬೆಲೆಯಲ್ಲಿ ಯಾವ ವ್ಯತ್ಯಾಸ ಸಂಭವಿಸಿದರೂ ಅದು ರೈತನಿಗೆ ಸಲ್ಲಬೇಕಾದ ಬೆಲೆಗೆ ಇಡಿಯಾಗಿ ವರ್ಗವಾಗುತ್ತದೆ. ಕೃಷಿ ಉತ್ಪನ್ನಗಳ ಬೆಲೆಗಳಲ್ಲಿ ಅಲ್ಪಾವಧಿಯಲ್ಲಿ ಎಷ್ಟೇ ಬದಲಾವಣೆಗಳಾಗಲಿ, ಮಾರಾಟ ಪ್ರಕ್ರಿಯೆಗಾಗಿ ಮಾಡಬೇಕಾದ ವೆಚ್ಚ ಮಾತ್ರ ಸಾಮಾನ್ಯವಾಗಿ ಸ್ಥಿರವಾಗಿಯೇ ಇರುತ್ತದೆ. ಕೃಷಿ ವಸ್ತುವಿನ ಸರಬರಾಜು ಅಧಿಕವಾದಾಗಲೂ ಅಷ್ಟೇ. ಉತ್ಪಾದಕನ ಬೆಲೆ ಮತ್ತು ಚಿಲ್ಲರೆ ಮಾರಾಟ ಬೆಲೆ-ಇವುಗಳ ನಡುವಣ ವೆಚ್ಚ ಸ್ಥಿರವಾಗಿರುವುದರಿಂದ ಚಿಲ್ಲರೆ ಮಾರಾಟ ಬೆಲೆ ರೂ. 100 ಆಗಿದ್ದು, ಅದರಲ್ಲಿ ರೈತನಿಗೆ ಸಲ್ಲುವ ಬೆಲೆ ರೂ. 50 ಆಗಿದ್ದಲ್ಲಿ, ಚಿಲ್ಲರೆ ಮಾರಾಟ ಬೆಲೆಯಲ್ಲಿ ಶೇ. 5 ರಷ್ಟು ಕಡಿಮೆಯಾದಾಗ ಅನುಭೋಗಿ ಆ ವಸ್ತುವಿಗೆ ರೂ. 95 ಕೊಡಬೇಕಾಗುತ್ತದೆ; ಮಧ್ಯವರ್ತಿಗಳ ವೆಚ್ಚದಲ್ಲಿ (ರೂ. 50) ಏನೂ ಕಡಿತವಾಗುವುದಿಲ್ಲ. ಆದರೆ ರೈತನಿಗೆ ಸಲ್ಲುವ ಬೆಲೆಯಲ್ಲಿ ರೂ. 5 ರ ಕಡಿತವಾಗಿ. ಅವನಿಗೆ ರೂ. 45 ಸಲ್ಲುತ್ತದೆ. ಎಂದರೆ ಚಿಲ್ಲರೆ ಮಾರಾಟ ಬೆಲೆಯಲ್ಲಿ ಆದ ಶೇ. 5 ರ ಇಳಿತದಿಂದಾಗಿ ಕೃಷಿ ಉತ್ಪಾದಕನ ಬೆಲೆಯಲ್ಲಿ ಸಂಭವಿಸುವ ಇಳಿತ ಶೇ. 10. ಇದು ಚಿಲ್ಲರೆ ಇಳಿತದ ಎರಡರಷ್ಟಾಗಿರುತ್ತದೆ. ಮಾರುಕಟ್ಟೆಯಲ್ಲಿ ಸಂಭವಿಸುವ ಅಲ್ಪ ಏರಿಳಿತಗಳೂ ರೈತನಿಗೆ ಸಲ್ಲುವ ಬೆಲೆಯ ಮೇಲೆ ಹೇಗೆ ತೀವ್ರ ಪರಿಣಾಮ ಬೀರುತ್ತವೆಂಬುದನ್ನು ಈ ಉದಾಹರಣೆ ಸ್ಪಷ್ಟಪಡಿಸುತ್ತದೆ.

	ಅನುಭೋಗಿಗಳ ವರಮಾನಗಳಲ್ಲಿ ಏರಿಳಿತಗಳುಂಟಾಗಿ ಕೃಷಿ ಪದಾರ್ಥಗಳ ಬೇಡಿಕೆಯಲ್ಲಿ ತಾತ್ಕಾಲಿಕವಾಗಿ ಏರಿಳಿತಗಳು ಸಂಭವಿಸಿದಾಗಲೂ ಕೃಷಿ ಉತ್ಪನ್ನಗಳ ಸರಬರಾಜಲ್ಲೇ ಏರಿಳಿತಗಳುಂಟಾಗಿ ಬೆಲೆಗಳಲ್ಲಿ ವ್ಯತ್ಯಾಸಗಳು ಸಂಭವಿಸಿದಾಗಲೂ ಮಾರುಕಟ್ಟೆಯ ವೆಚ್ಚಗಳು ಮಾತ್ರ ಬದಲಾಗದಿರುವುದಕ್ಕೆ ಹಲವಾರು ಕಾರಣಗಳಿವೆ. ಯಾವುದಾದರು ಒಂದು ಪದಾರ್ಥಕ್ಕೆ ಬೇಡಿಕೆ ತಗ್ಗಿ ಅದರ ಚಿಲ್ಲರೆ ಮಾರಾಟ ಬೆಲೆಗಳು ಇಳಿದ ಪಕ್ಷದಲ್ಲಿ ಅದಕ್ಕನುಗುಣವಾಗಿ ಸರಬರಾಜನ್ನು ಇಳಿಸಿ ಬೆಲೆಗಳ ಕುಸಿತವನ್ನು ತಪ್ಪಿಸುವ ಶಕ್ತಿ ರೈತನಿಗೆ ಇರುವುದಿಲ್ಲ. ಕಡಿಮೆ ಉತ್ಪನ್ನವನ್ನು ಮಾರಾಟ ಮಾಡುವ ಬದಲು, ಎಷ್ಟೇ ಕಡಿಮೆ ಬೆಲೆಯನ್ನಾದರೂ ಪಡೆದು ಎಲ್ಲ ಉತ್ಪನ್ನವನ್ನೂ ಮಾರಾಟ ಮಾಡಲು ರೈತ ಸಿದ್ಧನಾಗಿರುತ್ತಾನೆ. ಆದ್ದರಿಂದ ಬೆಲೆಗಳಲ್ಲಿ ಏನೇ ಏರಿಳಿತಗಳಾದರೂ ಮಧ್ಯವರ್ತಿಗಳ ಸೇವೆ ಮಾತ್ರ ಸ್ಥಿರವಾಗಿಯೇ ಇರುತ್ತದೆ. ತಮ್ಮ ಸೇವೆಗಳಿಗೆ ಬೇಡಿಕೆ ವ್ಯತ್ಯಾಸಗೊಳ್ಳುವುದಿಲ್ಲವೆಂಬ ಭರವಸೆಯಿರುವುದರಿಂದ ಅವರು ಕೃಷಿ ವಸ್ತುಗಳ ಬೆಲೆಗಳಿಗೆ ಅನುಗುಣವಾಗಿ ತಮ್ಮ ವರಮಾನಗಳನ್ನು ಕಡಿದುಕೊಳ್ಳುವ ಪ್ರವೃತ್ತಿಯನ್ನೇ ತೋರುವುದಿಲ್ಲ.

	ಕೃಷಿ ವಸ್ತುವಿನ ಬೆಲೆ ಇಳಿದದ್ದರ ಫಲವಾಗಿ ರೈತರು ಕಡಿಮೆ ಮಾರಾಟ ಮಾಡಲು ನಿರ್ಧರಿಸಿದಾಗ ಆ ವಸ್ತುವಿನ ಒಟ್ಟು ವಹಿವಾಟಿನ ಪರಿಮಾಣದಲ್ಲಿ ಇಳಿತಾಯವಾಗಬಹುದು. ಆದರೆ ಮಾರಾಟವಾದ ಉತ್ಪನ್ನದ ಪ್ರತಿಯೊಂದು ಘಟಕದ ಮೇಲೂ ಅವರು ವಿಧಿಸುವ ಶುಲ್ಕಗಳು ಮಾತ್ರ ಇಳಿಯುವುದಿಲ್ಲ. ಮಧ್ಯವರ್ತಿಗಳು ಮಾಡಬೇಕಾದ ಅನೇಕ ವೆಚ್ಚಗಳು ಸ್ಥಿರವಾಗಿರುವುದೇ ಇದಕ್ಕೆ ಕಾರಣ. ಚಿಲ್ಲರೆ ಮಾರಾಟ ಬೆಲೆಯಲ್ಲಿ ಏನೇ ವ್ಯತ್ಯಾಸವಾದರೂ ಅವರು ಅದನ್ನು ಕೃಷಿ ವಸ್ತುವಿನ ಉತ್ಪಾದಕನಿಗೆ ವರ್ಗಾಯಿಸುತ್ತಾರೆ. ಕೃಷಿ ಉತ್ಪನ್ನವನ್ನು ರೈತನಿಂದ ಕೊಂಡ ಬೆಲೆಯ ಮೇಲೆ ತಮ್ಮೆಲ್ಲ ವೆಚ್ಚಗಳನ್ನು ಹೇರಿ ಅದನ್ನು ಮಾರಾಟ ಮಾಡುತ್ತಾರೆ.

	ಉತ್ಪಾದಕನಿಗೂ ಅನುಭೋಗಿಗೂ ನಡುವೆ ಬರುವ ಅನೇಕ ಮಾರುಕಟ್ಟೆ ಸೇವೆಗಳು ಸಾಮಾನ್ಯವಾಗಿ ಏಕಸ್ವಾಮ್ಯ ಸ್ವರೂಪದವು. ರೈಲ್ವೆ ಒಂದು ಉದಾಹರಣೆ. ಉತ್ಪನ್ನದ ಪ್ರತಿ ಘಟಕಕ್ಕೆ ಇಷ್ಟು-ಎಂಬ ಆಧಾರದ ಮೇಲೆ ರೈಲ್ವೆ ದರಗಳು ದೀರ್ಘಕಾಲದಲ್ಲಿ ನಿಶ್ಚಿತವಾಗಿರುತ್ತವೆ. ಬೆಲೆಗಳ ಏರಿಳಿತಗಳಿಗೆ ತಕ್ಕಂತೆ ಈ ದರಗಳಲ್ಲಿ ವ್ಯತ್ಯಾಸವಾಗುವುದಿಲ್ಲ. ಅವಸಾನ (ಡಿಪ್ರೆಷನ್) ಕಾಲದಲ್ಲಿ ಕೂಡ ಈ ದರಗಳನ್ನು ಉಳಿಸಿಕೊಳ್ಳಲು ಇಂಥ ಏಕಸ್ವಾಮ್ಯಗಳು ಪ್ರಯತ್ನಿಸುತ್ತವೆ. ಅಸಂಘಟಿತರಾದ ರೈತರು ಇವನ್ನು ಎದುರಿಸಲಾರರು. ಅತಿಯಾದ ಲಾಭವಿಟ್ಟು ಮಾರಾಟ ಮಾಡುವ ಪ್ರವೃತ್ತಿಯನ್ನು ಸಾರ್ವಜನಿಕರು ಪ್ರತಿಭಟಿಸುವುದುಂಟು. ಆದರೆ ಮಧ್ಯವರ್ತಿ ಏಕಸ್ವಾಮ್ಯಗಳು ತಮ್ಮ ವರಮಾನವನ್ನು ಕಡಿದುಕೊಳ್ಳಲು ಇಷ್ಟಪಡದಿದ್ದಾಗ ಅದು ಅನೇಕರ ಗಮನವನ್ನೇ ಸೆಳೆಯುವುದಿಲ್ಲ. ಆರ್ಥಿಕ ಉತ್ಕರ್ಷಕಾಲಕ್ಕಿಂತ ಅವಸಾನ ಕಾಲದಲ್ಲೇ ಮಧ್ಯವರ್ತಿಗಳು ಹೆಚ್ಚು ಒತ್ತಡ ಹೇರುವ ಸ್ಥಿತಿಯಲ್ಲಿರುತ್ತಾರೆ.

	ಕೃಷಿ ಉತ್ಪನ್ನದ ಸರಬರಾಉ ಅಧಿಕವಾದ ಫಲವಾಗಿ ಬೆಲೆಗಳು ಇಳಿದಾಗಲೂ ಮಧ್ಯವರ್ತಿಗಳ ವೆಚ್ಚ ಒಂದೇ ಆಗಿರುವುದು ಮಾತ್ರವೇ ಅಲ್ಲ; ಸರಬರಾಜು ಅಧಿಕವಾದಾಗ ಮಧ್ಯವರ್ತಿಗಳ ಸೇವೆಗಳಿಗೆ ಬೇಡಿಕೆಯೂ ಅಧಿಕವಾಗುತ್ತದೆ. ಹೆಚ್ಚು ಗಾತ್ರದಲ್ಲಿ ಸರಕಿನ ವಹಿವಾಟು ನಡೆದಾಗಲೂ ಅವರು ವಿಧಿಸುವ ದರಗಳು ಮಾತ್ರ ಅಲ್ಪಾವಧಿಯಲ್ಲಿ ಸ್ಥಿರವಾಗಿಯೆ ಉಳಿಯುತ್ತದೆ. ಸರಬರಾಯಿ ಹೆಚ್ಚಿದಾಗ ಅವಕ್ಕೆ ಹೆಚ್ಚು ಬೆಲೆ ಬರುವವರೆಗೂ ಸರಕನ್ನು ತಡೆ ಹಿಡಿಯುವುದು ಅಗತ್ಯವಾಗುವುದರಿಂದ ಮಧ್ಯವರ್ತಿ ಅದನ್ನು ದಾಸ್ತಾನು ಮಾಡಲು ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ. ಒಳ್ಳೆಯ ಫಸಲು ಬಂದ ವರ್ಷಗಳಲ್ಲಿ ದಾಸ್ತಾನು ವೆಚ್ಚ ಏರುವ ಪ್ರವೃತ್ತಿ ಇರುತ್ತದೆ. ಈ ಕಾರಣಗಳಿಂದಾಗಿ ಕೃಷಿ ವಸ್ತುಗಳ ಬೇಡಿಕೆಯಲ್ಲಾಗಲಿ ಉತ್ಪಾದನೆಯಲ್ಲಾಗಲಿ ಏನೇ ಬದಲಾವಣೆಗಳಾದರೂ ಅದರ ಬಿಸಿ ತಟ್ಟುವುದು ವಿಶೇಷವಾಗಿ ರೈತರಿಗೇ ಹೊರತು, ಮಧ್ಯವರ್ತಿಗಳಿಗೆ ಏನೂ ಬಾಧಕವಿರುವುದಿಲ್ಲ.

	ಶ್ರಾಯೀಣ ಏರಿಳಿತಗಳು: ಕೃಷಿ ವಸ್ತುವಿನ ಇನ್ನೊಂದು ವೈಲಕ್ಷಣ್ಯವೆಂದರೆ ಋತುವಿಗೆ ಅನುಗುಣವಾಗಿ ಸಂಭವಿಸುವ ವ್ಯತ್ಯಾಸ. ಅನೇಕ ಕೃಷಿ ವಸ್ತುಗಳ ಬೇಡಿಕೆಯಲ್ಲಿ ಆಗುವ ವ್ಯತ್ಯಾಸಗಳಿಗಿಂತ ಸರಬರಾಯಿಯಲ್ಲಿ ಆಗುವ ವ್ಯತ್ಯಾಸಗಳೇ ಅಧಿಕ. ಅಕ್ಕಿ, ಗೋಧಿ, ಮಾಂಸ, ಮೊಟ್ಟೆ ಮುಂತಾದ ಆಹಾರ ಪದಾರ್ಥಗಳಿಗೆ ವರ್ಷವೆಲ್ಲ ಒಂದೇ ಸಮನಾಗಿ ಬೇಡಿಕೆ ಇರುತ್ತದೆ. ಮತ್ತೆ ಕೆಲವು ವಸ್ತುಗಳಿಗೆ ಕೆಲಕೆಲವು ಋತುಗಳಲ್ಲಿ ಅಥವಾ ವೇಳೆಗಳಲ್ಲಿ ಬೇಡಿಕೆ ಅಧಿಕವಾಗುತ್ತದೆ. ಕೆಲಕೆಲವು ಹಬ್ಬಗಳಲ್ಲಿ ಕೆಲಕೆಲವು ತರಕಾರಿಗಳಿಗೆ ಬೇಡಿಕೆ ಏರುವುದು ಒಂದು ಉದಾಹರಣೆ. ಆದರೂ ಒಟ್ಟಿನಲ್ಲಿ ಕೈಗಾರಿಕಾ ಸರಕುಗಳಿಗಿಂತ ಕೃಷಿ ಉತ್ಪನ್ನಗಳಿಗೆ ವರ್ಷವೆಲ್ಲ ಏಕರೀತಿಯಾದ ಬೇಡಿಕೆ ಇರುತ್ತದೆನ್ನಬಹುದು. ಆದರೆ ಅವುಗಳ ಸರಬರಾಯಿಯಲ್ಲಿ ಮಾತ್ರ ಋತುವಿಗೆ ಅನುಗುಣವಾಗಿ ಬಲು ತೀವ್ರ ವ್ಯತ್ಯಾಸಗಳಾಗುತ್ತವೆ. ದಾಸ್ತಾನು ಮಾಡಲು ಸಾಧ್ಯವೇ ಇಲ್ಲದ ಕೃಷಿ ಉತ್ಪನ್ನಗಳ ಬೆಲೆಗಳು ಋತುವಿನಿಂದ ಋತುವಿಗೆ ತೀವ್ರ ಬದಲಾವಣೆಗೆ ಒಳಗಾಗುತ್ತವೆ. ಉತ್ಪಾದನೆಯ ವೆಚ್ಚ ಮತ್ತು ಸಾರಿಗೆ ವೆಚ್ಚ-ಇವೇ ಅವುಗಳ ಮುಖ್ಯ ನಿರ್ಧಾರಕಗಳು. ಉದಾಹರಣೆಗೆ ಮಾವಿನ ಹಣ್ಣು; ಮೊದಮೊದಲು ಫಲಗಳು ಮಾರುಕಟ್ಟೆಗೆ ಬಂದಾಗ ಅವಕ್ಕೆ ದೊರಕುವ ಬೆಲೆ ಅಧಿಕ. ಕ್ರಮಕ್ರಮವಾಗಿ, ಹೆಚ್ಚು ಹಣ್ಣು ಮಾರುಕಟ್ಟೆಗೆ ಬಂದಂತೆ ಬೆಲೆ ಇಳಿಯುತ್ತದೆ. ಸರಬರಾಯಿಯ ಶಿಖರ ಮುಟ್ಟಿದ ಮೇಲೆ ಮತ್ತೆ ಬೆಲೆ ಕ್ರಮವಾಗಿ ಏರುತ್ತ ಸಾಗುತ್ತದೆ. ಅಕಾಲದಲ್ಲಿ ಮಾವಿನಹಣ್ಣು ಬೇಕಾದರೆ ಆಗ ಅದನ್ನು ಬೆಳೆಯಲು ತಗಲುವ ಅಧಿಕ ವೆಚ್ಚವನ್ನೂ ಕೊಡಲು ಅನುಭೋಗಿ ಸಿದ್ಧವಾಗಿರಬೇಕು. ದಾಸ್ತಾನು ಮಾಡಿಡಲಾಗದ ಇನ್ನೊಂದು ವಸ್ತುವೆಂದರೆ ಹಾಲು. ಆದರೆ ಶ್ರಾಯಾನುಗುಣವಾಗಿ ಇದರ ಬೆಲೆಯಲ್ಲಾಗುವ ಏರಿಳಿತಗಳ ಎಲ್ಲ ಋತುಗಳಲ್ಲೂ ಲಭ್ಯವಾಗುತ್ತದೆ. ಅದರ ಉತ್ಪನ್ನ ಹಣ್ಣು ಅಥವಾ ತರಕಾರಿಯಷ್ಟು ಸೀಮಿತವಲ್ಲ.

	ಹಣ್ಣು, ಹಾಲು ಮುಂತಾದ ನಾಶೀ (ಪೆರಿಷಬಲ್) ಪದಾರ್ಥಗಳನ್ನು ದಾಸ್ತಾನು ಮಾಡಿಡುವುದು ಸಾಧ್ಯವಿಲ್ಲವಾದರೂ ಅವನ್ನು ಸ್ಥಾಯೀ ಸ್ವರೂಪಕ್ಕೆ ಪರಿವರ್ತಿಸುವುದು ಸಾಧ್ಯ (ಉದಾ: ಹಾಲಿನ ಪುಡಿ). ಆದ್ದರಿಂದ ಯಾವುದು ದಾಸ್ತಾನಿಸಬಹುದಾದ ಪದಾರ್ಥ, ಯಾವುದು ದಾಸ್ತಾನಿಸಲಾಗದ್ದು-ಎಂದು ಪ್ರತ್ಯೇಕಿಸುವುದು ಬಹು ಕಷ್ಟ. ದಾಸ್ತಾನು ಮಾಡಬಹುದಾದ ಪದಾರ್ಥದ ಬೆಲೆಯ ಸ್ಥಿತಿ ಹೆಚ್ಚು ಸಂಕೀರ್ಣವಾಗಿರುತ್ತದೆ. ಅಂತ ಪದಾರ್ಥದ ಉತ್ಪಾದಕರು ಅನುಸರಿಸಬಹುದಾದ ಮಾರ್ಗಗಳು ಎರಡು. ಉತ್ಪಾದನೆಯ ವೆಚ್ಚ ಅತ್ಯಂತ ಕಡಿಮೆಯಿರುವ ಕಾಲದಲ್ಲಿ ಅವರು ಅದನ್ನು ಉತ್ಪಾದಿಸಿ ಅದರಲ್ಲಿ ಒಂದು ಭಾಗವನ್ನು ದಾಸ್ತಾನು ಮಾಡಿ ವರ್ಷವೆಲ್ಲ ಮಾರಾಟ ಮಾಡಬಹುದು; ಅಥವಾ, ಸಾಧ್ಯವಾದರೆ, ಅದನ್ನು ವರ್ಷವೆಲ್ಲ ಉತ್ಪಾದನೆ ಮಾಡಬಹುದು. ಅವರು ಯಾವ ಮಾರ್ಗ ಅನುಸರಿಸುವರೆಂಬುದು ದಾಸ್ತಾನಿನ ವೆಚ್ಚಕ್ಕೂ ಪದಾರ್ಥದ ಬೆಲೆಗೂ ಇರುವ ಸಂಬಂಧ ಮತ್ತು ಉತ್ಪಾದನೆಯ ವೆಚ್ಚಕ್ಕೂ ಪದಾರ್ಥದ ಬೆಲೆಗೂ ಇರುವ ಸಂಬಂಧ-ಇವನ್ನೇ ಅವಲಂಬಿಸುತ್ತದೆ. ದಾಸ್ತಾನಿನ ವೆಚ್ಚದಲ್ಲಿ ಸೇರಿರುವ ಅಂಶಗಳು ಆರು: 1. ಭವಿಷ್ಯದಲ್ಲಿ ವಸ್ತುವನ್ನು ಮಾರಾಟ ಮಾಡುವ ವರೆಗೂ ತಡೆದು ಕೊಳ್ಳುವ ಶಕ್ತಿ ಬಂಡವಾಳ. 2. ದಾಸ್ತಾನು ಮಾಡಲು ಅಗತ್ಯವಾದ ಕಟ್ಟಡ, ಉಪಕರಣ ಇತ್ಯಾದಿ. 3. ದಾಸ್ತಾನಾದ ಪದಾರ್ಥದಲ್ಲಿ ಒಂದು ಭಾಗ ಕೆಡುವುದರಿಂದ ಸಂಭವಿಸಬಹುದಾದ ನಷ್ಟ. 4. ದಾಸ್ತಾನು ಮಾಡಿಡಲು ಸಾಧ್ಯವಾಗುವಂತೆ ಸರಕನ್ನು ಪರಿಷ್ಕರಿಸಲು ಮಾಡಬೇಕಾದ ವೆಚ್ಚ (ಉದಾ : ಹಾಲಿನ ಪುಡಿ, ಮಾವಿನ ಹಣ್ಣಿನ ಮೊರಬ್ಬ). 5. ದಾಸ್ತಾನು ಮಾಡಿದ ಪದಾರ್ಥದ ಬೆಲೆ ಇಳಿದು ಸಂಭವಿಸಬಹುದಾದ ನಷ್ಟ. 6. ದಾಸ್ತಾನಾದ ಹಳೆಯ ಪದಾರ್ಥದ ಬದಲು ಹೊಚ್ಚ ಹೊಸ ಪದಾರ್ಥವನ್ನು ಕೊಳ್ಳಲು ಅನುಭೋಗಿ ಕೊಡಲು ಇಷ್ಟಪಡುವ ಬೆಲೆ. ಉತ್ಪಾದನೆಯ ಕಾಲದಲ್ಲಿ ಪದಾರ್ಥಕ್ಕೆ ದೊರಕುವ ಬೆಲೆಗೂ ಭವಿಷ್ಯದಲ್ಲಿ ಅದನ್ನು ಮಾರಾಟ ಮಾಡುವಾಗ ದೊರಕುವ ಬೆಲೆಗೂ ಇರುವ ಅಂತರಕ್ಕಿಂತ ದಾಸ್ತಾನಿನ ವೆಚ್ಚ ಮತ್ತು ನಷ್ಟ ಸಂಭವದ ಮೌಲ್ಯ ಅಧಿಕವಾಗಿಲ್ಲದಾಗ ಮಾತ್ರವೇ ಕೃಷಿ ಉತ್ಪನ್ನಗಳನ್ನು ದಾಸ್ತಾನು ಮಾಡಬಹುದು. ಇವು ಪದಾರ್ಥದಿಂದ ಪದಾರ್ಥಕ್ಕೆ ಹೆಚ್ಚು ಕಡಿಮೆಯಾಗುತ್ತಿರುತ್ತವೆ. ಪದಾರ್ಥದ ನಾಶೀಗುಣ, ಅದರ ಗಾತ್ರ-ಮುಂತಾದವೇ ಇದರ ನಿರ್ಣಾಯಕಗಳು, ಋತುವಿನಿಂದ ಋತುವಿಗೆ ಪದಾರ್ಥದ ಬೆಲೆಯಲ್ಲಿ ಆಗುವ ವ್ಯತ್ಯಾಸಗಳು, ವರ್ಷದ ಬೇರೆಬೇರೆ ಋತುಗಳಲ್ಲಿ ಅದನ್ನು ಉತ್ಪಾದಿಸಲು ತಗಲುವ ವೆಚ್ಚ-ಇವೂ ಬಹು ಮುಖ್ಯವಾದ ಅಂಶಗಳು. ಅನೇಕ ಅಗತ್ಯ ವಸ್ತುಗಳನ್ನು ಅವುಗಳ ಉತ್ಪಾದನ ವೆಚ್ಚ ಬಲು ಕಡಿಮೆಯಿರುವ ಕಾಲದಲ್ಲಿ ಉತ್ಪಾದಿಸಿ, ದಾಸ್ತಾನಿನಲ್ಲಿಟ್ಟಿದ್ದು ವರ್ಷಾದ್ಯಂತ ಬರುವ ಬೇಡಿಕೆಗೆ ಅನುಗುಣವಾಗಿ ಮಾರಾಟ ಮಾಡುವ ವಾಡಿಕೆಯಿದೆ. ಸುಗ್ಗಿಯ ಕಾಲದಲ್ಲಿ ಇಂಥ ಪದಾರ್ಥದ ಬೆಲೆ ಅತ್ಯಂತ ಕಡಿಮೆಯಿದ್ದು ಅನಂತರ ಮುಂದಿನ ಸುಗ್ಗಿಯ ವರೆಗೆ ಏರುತ್ತ ಸಾಗುತ್ತದೆ. ದಿನ ಕಳೆದಂತೆಲ್ಲ ದಾಸ್ತಾನಿನ ವೆಚ್ಚವೂ ಏರುತ್ತ ಸಾಗುವುದರಿಂದ, ಸರಕಿನ ಬೆಲೆಯ ಏರಿಕೆಯಲ್ಲಿ ಈ ಅಂಶವೂ ಸೇರಿರುವುದು ಅವಶ್ಯಕ. 

	ದಾಸ್ತಾನಿನ ವೆಚ್ಚಕ್ಕಿಂತ ಸಾರಿಗೆಯ ವೆಚ್ಚ ಕಡಿಮೆಯಾಗಿದ್ದು, ವಿಶ್ವದ ವಿವಿಧ ಪ್ರದೇಶಗಳಲ್ಲಿ ಬೇರೆ ಬೇರೆ ಕಾಲಗಳಲ್ಲಿ ಅದರ ಉತ್ಪಾದನೆ ಸಾಧ್ಯವಿದ್ದರೆ ಆಗ ಅನುಭೋಗಿ ಇರುವೆಡೆಗೆ ಬೇರೆಬೇರೆ ಕಾಲಗಳಲ್ಲಿ ಬೇರೆಬೇರೆ ಕಡೆಗಳಿಂದ ಸರಕಿನ ಸರಬರಾಯಿ ಆಗುವುದು ಸಾಧ್ಯ. ಗೋಧಿ ಒಂದು ಉದಾಹರಣೆ. ಉತ್ತರಾರ್ಧಗೋಳದ ಸಮಶೀತೋಷ್ಣ ವಲಯದಲ್ಲಿ ಜುಲೈ-ಆಗಸ್ಟ್‍ನಲ್ಲಿ ಸುಗ್ಗಿಯಾದರೆ, ದಕ್ಷಿಣಾರ್ಧಗೋಳದಲ್ಲಿ ಡಿಸೆಂಬರಿನಲ್ಲಿ ಸುಗ್ಗಿ, ಈ ಕಾರಣದಿಂದ ವರ್ಷದಲ್ಲಿ ಎರಡು ಬಾರಿ ಇದರ ಬೆಲೆ ಕಡಿಮೆಯಿರುತ್ತದೆ.

	ಹೀಗೆ ಸಹಜವಾಗಿ ಸಂಭವಿಸುವ ಬೆಲೆಗಳ ಏರಿಳಿತಗಳನ್ನು ಮೊದಲೇ ನಿರೀಕ್ಷಿಸಲು ಸಾಧ್ಯವಾಗುವುದರಿಂದ ಅದನ್ನು ಎದುರಿಸಲು ಸೂಕ್ತ ವ್ಯವಸ್ಥೆ. ಮಾಡಿಕೊಳ್ಳುವುದು ಸಾಧ್ಯ. ಆದರೆ ಸುಗ್ಗಿಯಲ್ಲಿ ಸಹಜವಾಗಿ ಇಳಿಯಬೇಕಾದ್ದಕ್ಕಿಂತ ಹೆಚ್ಚಾಗಿ ಬೆಲೆ ಇಳಿಯುವುದೂ ಅನಂತರಕಾಲದಲ್ಲಿ ಸಹಜವಾಗಿ ಏರಬೇಕಾದ್ದಕ್ಕಿಂತ ಹೆಚ್ಚಾಗಿ ಏರುವುದೂ ಕೃಷಿಯಲ್ಲಿ ಕಂಡುಬಂದಿರುವ ಒಂದು ಪ್ರವೃತ್ತಿ. ಇವೆರಡು ಬೆಲೆಗಳ ನಡುವಣ ಅಂತರ ದಾಸ್ತಾನಿನ ವೆಚ್ಚಕ್ಕಿಂತ ಬಹಳ ಅಧಿಕವಾಗಿರುವುದುಂಟು. ತನ್ನ ಫಸಲನ್ನು ಮಾರಾಟಮಾಡದೆ ಸ್ವಲ್ಪ ತಡೆಹಿಡಿಯಲು ಅಗತ್ಯವಾದ ಧಾರಣಶಕ್ತಿ ರೈತನಲ್ಲಿ ಇಲ್ಲದ್ದರಿಂದ ಅವನ ಪರಿಸ್ಥಿತಿಯ ದುರುಪಯೋಗವನ್ನು ಮಧ್ಯವರ್ತಿ ಪಡೆದುಕೊಳ್ಳುತ್ತಾನೆಂಬುದು ಇದಕ್ಕೆ ಒಂದು ಕಾರಣ. ಅಲ್ಲದೆ ಫಸಲನ್ನು ಬೆಳೆದ ಸ್ಥಳದಲ್ಲೇ ದಾಸ್ತಾನು ಮಾಡಲು ಹೆಚ್ಚು ಖರ್ಚಾಗುವುದಿಲ್ಲ. ಆದರೆ ವರ್ತಕರ ದಾಸ್ತಾನು ವೆಚ್ಚ ಅಧಿಕವಾಗಿರುತ್ತವೆ. ಆದ್ದರಿಂದ ಎಷ್ಟು ಬೇಗ ಫಸಲಿನ ಎಷ್ಟು ಅಧಿಕ ಪ್ರಮಾಣ ರೈತನ ಕೈಯಿಂದ ವರ್ತಕನ ಕೈಗೆ ವರ್ಗವಾಗುತ್ತದೋ, ಅಷ್ಟರ ಮಟ್ಟಿಗೆ ಅದರ ದಾಸ್ತಾನು ವೆಚ್ಚ ಹೆಚ್ಚುತ್ತದೆಯೆಂದು ಹೇಳಲಾಗಿದೆ. ಅನೇಕ ವೇಳೆ ಹೀಗಾಗಿರುವುದಕ್ಕೆ ಅಂಕಿ ಅಂಶಗಳ ಆಧಾರವುಂಟು. ಆದರೆ ಯಾವಾಗಲೂ ಹೀಗಾಗುವುದೆಂಬುದಕ್ಕೆ ಸಾಕಷ್ಟು ಪುರಾವೆಯಿಲ್ಲ. ನ್ಯಾಯವಾದ್ದಕ್ಕಿಂತ ಅಧಿಕವಾಗಿ ಕೃಷಿ ವಸ್ತುಗಳ ಬೆಲೆಗಳಲ್ಲಿ ಏರಿಳಿತಗಳು ಸಂಭವಿಸುವುದಕ್ಕೆ ಇನ್ನೊಂದು ಮುಖ್ಯ ಕಾರಣವೆಂದರೆ ಮಾರುಕಟ್ಟೆಯ ಸ್ಥಿತಿಗತಿಗಳ ಬಗ್ಗೆ ಜನರಲ್ಲಿರುವ ಅಜ್ಞಾನ. ಅವರೆಕಾಯಿ, ಆಲೂಗೆಡ್ಡೆ, ಮಾವಿನಹಣ್ಣು ಮುಂತಾದವುಗಳ ಫಸಲುಗಳು ವರ್ಷದಿಂದ ವರ್ಷಕ್ಕೆ ವ್ಯತ್ಯಾಸವಾಗುತ್ತಿರುತ್ತವೆ. ಬೆಲೆಗಳಲ್ಲೂ ತೀವ್ರ ಏರಿಳಿತಗಳಾಗುತ್ತವೆ. ಕೃಷಿ ಉತ್ಪನ್ನಗಳ ಮಾರಾಟ ಕಾರ್ಯದಲ್ಲಿ ಸರ್ಕಾರದ ಮಧ್ಯಪ್ರವೇಶ ಅವಶ್ಯವೆನಿಸಿರುವುದಕ್ಕೆ ಈ ಪ್ರವೃತ್ತಿಯೂ ಒಂದು ಕಾರಣ.

	ವಾರ್ಷಿಕ ಏರಿಳಿತಗಳು : ಹಿಂದೆ ಹೇಳಿದಂತೆ ಕೃಷಿ ಉತ್ಪನ್ನಗಳ ಪರಿಮಾಣ ವರ್ಷದಿಂದ ವರ್ಷಕ್ಕೆ ವ್ಯತ್ಯಾಸವಾಗುತ್ತಿರುತ್ತದೆ. ಕೆಲವು ವರ್ಷಗಳಲ್ಲಿ ಉತ್ತಮ ಫಸಲು, ಮತ್ತೆ ಕೆಲವು ವರ್ಷಗಳಲ್ಲಿ ಕಡಿಮೆ-ಇದು ಸಾಮಾನ್ಯವಾಗಿ ಕಂಡು ಬರುವ ಅನುಭವ. ಕೃಷಿ ಬಹುತೇಕ ಹವೆಯನ್ನೇ ಅವಲಂಬಿಸಿರುತ್ತದೆ. ಆದರೆ ಈ ವ್ಯತ್ಯಾಸಗಳು ಎಲ್ಲ ವಸ್ತುಗಳಲ್ಲೂ ಒಂದೇ ಸಮನಾಗಿರುವುದಿಲ್ಲ. ಪ್ರಾಣೀಜನ್ಯ ವಸ್ತುಗಳಲ್ಲಿ ಇದು ಬಲು ಕಡಿಮೆ. ವೃಕ್ಷೋತ್ಪನ್ನಗಳಲ್ಲಿ (ಉದಾ: ಮಾವಿನ ಹಣ್ಣು) ಇದು ಅತ್ಯಧಿಕ. ಫಸಲಿನ ಏರಿಳಿತಗಳನ್ನು ಮುಂದಾಗಿ ನಿರೀಕ್ಷಿಸುವುದು ಸಾಧ್ಯವಿಲ್ಲವಾದ್ದರಿಂದ ಅವನ್ನು ಸರಿದೂಗಿಸಲು ಬೇಸಾಯದ ನೆಲವನ್ನು ಅಲ್ಪಾವಧಿಯಲ್ಲಿ ಹೆಚ್ಚು ಕಡಿಮೆ ಮಾಡುವುದು ಸಾಧ್ಯವಾಗುವುದಿಲ್ಲ. ಒಂದು ಪದಾರ್ಥವನ್ನು ಉತ್ಪಾದಿಸುವ ಪ್ರದೇಶ ವಿಸ್ತಾರವಾದಷ್ಟೂ ಅದರ ಸರಬರಾಯಿಯಲ್ಲಿಯ ವ್ಯತ್ಯಾಸಗಳು ಕಡಿಮೆಯಾಗಿರುತ್ತವೆ. ಒಂದು ಸ್ಥಳದಲ್ಲಿ ಒಂದು ಪದಾರ್ಥದ ಉತ್ಪಾದನೆ ತಗ್ಗಿದರೆ ಇನ್ನೊಂದು ಸ್ಥಳದಲ್ಲಿ ಸಮೃದ್ಧ ಫಸಲು ದೊರಕಬಹುದು. ಗೋಧಿಯಂಥ ಪದಾರ್ಥವನ್ನು ಬೆಳೆಯುವ ಪ್ರದೇಶಗಳು ವಿಶ್ವದ ಹಲವೆಡೆ ಇವೆ. ಅದರ ಮಾರುಕಟ್ಟೆಯೂ ವಿಶ್ವವ್ಯಾಪಿ. ಆದ್ದರಿಂದ ಅದರ ಬೆಲೆಯ ಏರಿಳಿತ ಅತಿ ತೀವ್ರವಲ್ಲ. ಆಲೂಗೆಡ್ಡೆ, ಮಾವಿನಹಣ್ಣು-ಇಂಥವುಗಳ ಬೆಲೆ ಹಾಗಲ್ಲ. ಆದರೂ ಒಟ್ಟಿನಲ್ಲಿ ಇಷ್ಟು ಹೇಳಬಹುದು: ಒಂದು ಉತ್ಪನ್ನದ ಮಾರುಕಟ್ಟೆಯ ವ್ಯಾಪ್ತಿಗೆ ಒಳಪಟ್ಟ ಎಲ್ಲ ಕ್ಷೇತ್ರಗಳಲ್ಲಿಯ ಒಟ್ಟು ಸರಬರಾಯಿಗೆ ಅನುಗುಣವಾಗಿ ಅದರ ಬೆಲೆ ಏರಿಳಿಯುತ್ತದೆ. ಆಯಾ ಸ್ಥಳಗಳಲ್ಲಿಯ ಉತ್ಪನ್ನದ ಮೊತ್ತಗಳಿಗನುಗುಣವಾಗಿ ಆಯಾ ಸ್ಥಳಗಳಲ್ಲಿ ಬೆಲೆಗಳು ಸ್ವಲ್ಪ ಹೆಚ್ಚು ತೀವ್ರವಾಗಿ ವ್ಯತ್ಯಾಸವಾಗುತ್ತವೆ. ಸಾರಿಗೆ ವೆಚ್ಚ, ಅಪರಿಪೂರ್ಣ ಸ್ಫರ್ಧೆ- ಇವು ಸ್ಥಳೀಯ ಏರುಪೇರುಗಳಿಗೆ ಕಾರಣವಾದ ಅಂಶಗಳು.

	ಉತ್ಪನ್ನದ ವಾರ್ಷಿಕ ವ್ಯತ್ಯಾಸಗಳಿಂದ ಬೆಲೆಗಳು ಯಾವ ಪ್ರಮಾಣದಲ್ಲಿ ವ್ಯತ್ಯಾಸಗೊಳ್ಳುವುವೆಂಬುದನ್ನು ಅರಿಯಲು ಸಹಾಯಕವಾಗುವ ಇನ್ನೊಂದು ಅಂಶವೆಂದರೆ ಬೇಡಿಕೆಯ ಸ್ವರೂಪ. ಆಹಾರಧಾನ್ಯಗಳ ಬೇಡಿಕೆ ಸಾಮಾನ್ಯವಾಗಿ ವ್ಯತ್ಯಾಸವಾಗುವುದಿಲ್ಲ. ಅವು ಅವಶ್ಯಕ ವಸ್ತುಗಳಾದ್ದರಿಂದ ಬೆಲೆಯಷ್ಟೇ ಇದ್ದರೂ ಸಾಮಾನ್ಯವಾಗಿ ಒಂದೇ ಸಮನಾದ ಬೇಡಿಕೆ ಇರುತ್ತದೆ. ಆದ್ದರಿಂದ ಅವುಗಳ ಸರಬರಾಯಿಯಲ್ಲಿ ಹೆಚ್ಚುಕಡಿಮೆಯಾದರೆ ಬೆಲೆಗಳು ಹೆಚ್ಚು ತೀವ್ರವಾಗಿ ವ್ಯತ್ಯಾಸವಾಗುತ್ತವೆ.

	ಉತ್ಪನ್ನವನ್ನು ಹೆಚ್ಚು ಕಾಲ ದಾಸ್ತಾನು ಮಾಡಿಡುವುದು ಸಾಧ್ಯವಿದ್ದರೆ, ಆ ಮೂಲಕ ಶ್ರಾಯೀಣ ಬೆಲೆ ಏರಿಳಿತಗಳನ್ನು ತಗ್ಗಿಸುವುದು ಸಾಧ್ಯವಿರುವಂತೆಯೇ ವಾರ್ಷಿಕ ಏರಿಳಿತಗಳನ್ನೂ ಸ್ವಲ್ಪಮಟ್ಟಿಗೆ ಸುಧಾರಿಸಬಹುದು. ಹೆಚ್ಚು ಬೆಳೆ ಬಂದ ವರ್ಷದಲ್ಲಿ ಸಹಜವಾಗಿ ಇರಬಹುದಾದ್ದಕ್ಕಿಂತ ಕಡಿಮೆ ಬೆಲೆಯೂ ಇರುತ್ತವೆ. ಫಸಲಿನ ಏರಿಳಿತ ವರ್ಷದಿಂದ ವರ್ಷಕ್ಕೆ ತೀವ್ರವಾಗಿದ್ದು, ಬೇಡಿಕೆಯಲ್ಲೂ ಅಪುಟಿತತೆ ಇದ್ದ ಪಕ್ಷದಲ್ಲಿ ಉತ್ಪನ್ನವನ್ನು ದಾಸ್ತಾನು ಮಾಡುವುದರಿಂದ ವರ್ತಕನಿಗೆ ಅನುಕೂಲ ಹೆಚ್ಚು. ಆದರೆ ನಷ್ಟಸಂಭವವೂ ಉಂಟು. ಕಾಫಿ ಒಂದು ಉದಾಹರಣೆ. ಒಂದು ವರ್ಷ ಸಮೃದ್ಧ ಫಸಲು ಬಂದರೆ ಮುಂದಣ ಎರಡು ಮೂರು ಫಸಲುಗಳು ಕಡಿಮೆಯಾಗಿರುವುವೆಂಬುದು ಸಾಮಾನ್ಯ ಅನುಭವ. ಆದರೆ ಒಮ್ಮೊಮ್ಮೆ ಎರಡು ವರ್ಷ ಒಟ್ಟಿಗೆ ಸಮೃದ್ಧ ಫಸಲು ಲಭ್ಯವಾಗುವುದೂ ಉಂಟು. ಮೊದಲನೆಯ ವರ್ಷ ಹೆಚ್ಚು ದಾಸ್ತಾನಿಟ್ಟ ವರ್ತಕನಿಗೆ ಮರುವರ್ಷದ ಸಮೃದ್ಧ ಫಸಲಿನಿಂದ ನಷ್ಟ ತಟ್ಟಬಹುದು. ಬೆಲೆಗಳ ಶ್ರಾಯೀಣ ಏರಿಳಿತಗಳನ್ನು ನಿವಾರಿಸುವ ಸಲುವಾಗಿ ದಾಸ್ತಾನು ಮಾಡುವುದಕ್ಕಿಂತ, ವಾರ್ಷಿಕ ಏರಿಳಿತಗಳನ್ನು ನೇರಗೊಳಿಸಲು ದಾಸ್ತಾನು ಮಾಡುವುದರಿಂದ ನಷ್ಟಸಂಭವ ಅಧಿಕ. ದಾಸ್ತಾನು ವೆಚ್ಚವೂ ಅಧಿಕ. ಈ ವೆಚ್ಚವನ್ನೂ ನಷ್ಟಸಂಭವವನ್ನೂ ತುಂಬಿಕೊಡುವಷ್ಟು ಲಾಭ ದೊರಕುವಂಥ ನಿರೀಕ್ಷೆಯಿದ್ದಾಗ ಮಾತ್ರ ದೀರ್ಘಕಾಲಿಕ ದಾಸ್ತಾನು ಸಾರ್ಥಕವಾಗುತ್ತದೆ. 

	ಬೆಲೆಗಳ ವಾರ್ಷಿಕ ಏರಿಳಿತದ ಪರಿಣಾಮವಾಗಿ ರೈತನ ವರಮಾನ ವ್ಯತ್ಯಾಸವಾಗುತ್ತವೆ. ಯಾವ ಪದಾರ್ಥಕ್ಕೆ ಬೇಡಿಕೆಯಲ್ಲಿ ಹೆಚ್ಚು ಪುಟಿತತೆ ಇರುತ್ತದೆಯೋ ಅದರ ಉತ್ಪನ್ನ ಅಧಿಕವಾದಷ್ಟೂ ಅವನ ವರಮಾನ ಹೆಚ್ಚುತ್ತದೆ(ಉದಾಹರಣೆ : ಹಾಲು). ಯಾವುದಕ್ಕೆ ಬೇಡಿಕೆಯಲ್ಲಿ ಪುಟಿತತೆ ಇರುವುದಿಲ್ಲವೋ ಅದರ ಉತ್ಪನ್ನ ಕಡಿಮೆಯಾದಾಗ ಅವನಿಗೆ ಲಭ್ಯವಾಗುವ ವರಮಾನಕ್ಕಿಂತಲೂ ಅದರ ಉತ್ಪನ್ನ ಹೆಚ್ಚಾದಾಗ ಕಡಿಮೆ ವರಮಾನ ಲಭ್ಯವಾಗಬಹುದು (ಉದಾಹರಣೆ : ಆಲೂಗೆಡ್ಡೆ). ಹೆಚ್ಚು ಬೆಳೆ ತೆಗೆಯಲು ಹೆಚ್ಚು ವೆಚ್ಚ ಮಾಡಬೇಕೆಂಬುದು ನಿಜ. ಬೀಜದ ಬಿತ್ತನೆ, ಗಿಡದ ನಾಟಿ, ಸಾಗುವಳಿ ಮುಂತಾದ ವೆಚ್ಚಗಳನ್ನೂ ಫಸಲು ಬರುವುದಕ್ಕೆ ಮುಂಚೆಯೇ ಮಾಡಬೇಕು. ಆದ್ದರಿಂದ ಫಸಲಿನ ಪರಿಮಾಣಕ್ಕೆ ಅನುಗುಣವಾಗಿ ಅವನ್ನು ಏರಿಸುವುದಕ್ಕಾಗುವುದಿಲ್ಲ. ಫಸಲಿಗೆ ನೇರವಾಗಿ ಸಂಬಂಧಿಸಿದ್ದೆಂದರೆ ಸುಗ್ಗಿಯ ವೆಚ್ಚ. ಆಲೂಗೆಡ್ಡೆಯಂಥ ಫಸಲಿನ ವಿಚಾರದಲ್ಲಿ ಈ ವೆಚ್ಚ ಭಾರಿಯಾಗಿರುತ್ತದೆ. ಆದ್ದರಿಂದ ಇಲ್ಲಿ ಬೆಲೆಯ ಏರಿಳಿತಗಳಿಂದ ರೈತರ ವರಮಾನದ ಮೇಲೆ ಆಗುವ ಪರಿಣಾಮ ಹೆಚ್ಚು ತೀವ್ರ.

	ಚಕ್ರೀಯ ಏರಿಳಿತಗಳು: ಅನೇಕ ಕೃಷಿ ವಸ್ತುಗಳ ಉತ್ಪನ್ನ ಕೆಲವು ವರ್ಷಗಳಿಗೊಮ್ಮೆ ನಿಯತವಾಗಿ ಏರಿಳಿಯುತ್ತಿರುತ್ತವೆಂಬುದನ್ನು ನೋಡಿದ್ದಾಯಿತು. ಆಲೂಗೆಡ್ಡೆಯ ಫಸಲಿನ ಏರಿಳಿತದ ಚಕ್ರದ ಅವಧಿ ಮೂರುನಾಲ್ಕು ವರ್ಷ. ಕಾಫಿ, ಮಾವಿನ ಹಣ್ಣು ಮುಂತಾದ ಅನೇಕ ಫಸಲುಗಳಲ್ಲೂ ಈ ಬಗೆಯ ಚಕ್ರಗಳನ್ನು ಗುರುತಿಸಬಹುದು. ಈ ಫಸಲುಗಳೆಲ್ಲ ಏಕಕಾಲದಲ್ಲಿ ಏರುತ್ತ ಏಕಕಾಲದಲ್ಲಿ ಇಳಿಯುತ್ತ ಸಾಗುವುದಿಲ್ಲವೆಂಬುದನ್ನು ಗಮನಿಸಬೇಕು. ಇವುಗಳ ಪ್ರಕ್ರಿಯೆ ವಿಭಿನ್ನವಾದ್ದು. ಒಂದೊಂದು ವಸ್ತುವಿನ ಫಸಲೂ ಸ್ಥೂಲವಾಗಿ ಚಕ್ರೀಯವಾಗಿ ಏರಿಳಿಯುವ ಪ್ರವೃತ್ತಿ ತೋರಿಸುವುದಾದರೂ ಈ ನಿರೀಕ್ಷೆಯಲ್ಲೂ ವಾರ್ಷಿಕವಾಗಿ ವ್ಯತ್ಯಾಸಗಳಾಗುವುದುಂಟು. ಅಂತೂ ಈ ಏರಿಳಿತಗಳು ರೈತನ ಹತೋಟಿಗೆ ಒಳಪಡದೆ ಇರುವಂಥವು.

	ಆದರೆ ಯಾವುದೇ ವಸ್ತುವಿನ ಬೆಲೆಗಳು ಅಧಿಕವಾಗುವ ಪ್ರವೃತ್ತಿಯಿದ್ದರೆ ಅಥವಾ ಅದರ ವರಮಾನ ಅಧಿಕವಾಗುವ ನಿರೀಕ್ಷೆಯಿದ್ದರೆ, ಅಂಥ ವಸ್ತುವನ್ನು ಬೆಳೆಯುವ ರೈತರು ಅದನ್ನು ಹೆಚ್ಚಾಗಿ ಉತ್ಪಾದಿಸುವ ತೀರ್ಮಾನ ಕೈಗೊಳ್ಳಬಹುದು. ಬೇಡಿಕೆಯ ಪುಟಿತತೆ, ಉತ್ಪಾದನೆಯ ವೆಚ್ಚ, ಸರಬರಾಯಿಯಿಂದ ಬೆಲೆ ಮತ್ತು ವರಮಾನಗಳ ಮೇಲೆ ಆಗುವ ಪರಿಣಾಮ-ಇವೆಲ್ಲವೂ ಈ ತೀರ್ಮಾನದ ಮೇಲೆ ಪ್ರಭಾವ ಬೀರುವ ಅಂಶಗಳು. ಒಂದು ಪದಾರ್ಥದ ಉತ್ಪಾದನೆಯನ್ನು ಹೆಚ್ಚಿಸಬೇಕೆಂಬ ತೀರ್ಮಾನ ಮಾಡಿ ಅದನ್ನು ಕಾರ್ಯಗತಗೊಳಿಸಲೂ ಅದರ ಫಲ ಪಡೆಯಲೂ ಎಷ್ಟು ಕಾಲ ಬೇಕಾಗುವುದೆಂಬುದು ಆ ಉತ್ಪನ್ನದ ಸ್ವರೂಪವನ್ನೇ ಅವಲಂಬಿಸುತ್ತದೆ. ಬತ್ತ, ಗೋಧಿ ಮುಂತಾದವುಗಳ ಉತ್ಪನ್ನವನ್ನು ಹೆಚ್ಚಿಸಲು ಸಾಮಾನ್ಯವಾಗಿ ಹೆಚ್ಚು ನೆಲವನ್ನು ಆ ಧಾನ್ಯದ ಬಿತ್ತನೆಗೆ ಒಳಪಡಿಸಬೇಕು. ಈ ಬಗ್ಗೆ ತೀರ್ಮಾನವನ್ನು ಒಂದು ವರ್ಷ ಮುಂಚೆಯಾದರೂ ಕೈಗೊಳ್ಳಬೇಕು. ಮಾಂಸದ ಉತ್ಪನ್ನ ಹೆಚ್ಚಿಸಲು ಮೂರು ವರ್ಷವಾದರೂ ಬೇಕಾದೀತು. ಕಾಫಿಗಾದರೆ ಐದು ವರ್ಷ. ಈ ದೀರ್ಘಕಾಲದ ಅನಂತರವೂ ತನಗೆ ಲಾಭ ಬಂದೀತೆಂದು ರೈತ ಭಾವಿಸಿದರೆ ಮಾತ್ರವೇ ಆತ ಹೆಚ್ಚು ಉತ್ಪನ್ನಕ್ಕಾಗಿ ವೆಚ್ಚ ಮಾಡಲು ಸಿದ್ಧನಾಗಿರುತ್ತಾನೆ. ಉತ್ಪನ್ನ ಹೆಚ್ಚಿಸಬೇಕೆಂದು ಒಮ್ಮೆ ತೀರ್ಮಾನಿಸಿ ಆ ಬಗ್ಗೆ ಕ್ರಮ ಕೈಗೊಂಡ ಮೇಲೆ, ಮಧ್ಯದಲ್ಲಿ ಅವನ ನಿರೀಕ್ಷೆ ಸುಳ್ಳಾದರೆ ಆಗ ಆತ ಅದಕ್ಕೆ ತಡೆ ಒಡ್ಡುವುದು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಕಾಫಿ : ಹುಟ್ಟು ಹಾಕಿದ ಹತ್ತು ವರ್ಷದ ವೇಳೆಗೆ ಕಾಫಿ ಗಿಡದ ಫಸಲು ಸಾಮಾನ್ಯವಾಗಿ ಗರಿಷ್ಠ ಸ್ಥಿತಿ ಮುಟ್ಟಿ ಅನಂತರ ಸುಮಾರು ಹತ್ತು ವರ್ಷ ಕಾಲ ಹೆಚ್ಚು ಕಡಿಮೆ ಅದೇ ಮಟ್ಟದಲ್ಲಿ ಮುಂದುವರಿಯುತ್ತದೆ (ವಾರ್ಷಿಕ ಏರಿಳಿತಗಳಿಗೆ ಒಳಪಟ್ಟು). ನಡುದಾರಿಯಲ್ಲಿ ಉತ್ಪನ್ನವನ್ನು ಮೊಟಕು ಮಾಡುವುದು ಉತ್ಪಾದಕನ ಕೈಯಲ್ಲಿಲ್ಲ. ಹೆಚ್ಚು ಕಾಫಿ ಫಸಲು ತೆಗೆಯಲು ತೀರ್ಮಾನಿಸಿದ ಈ ರೈತನಂತೆಯೇ ಇನ್ನೂ ಅನೇಕರು ತೀರ್ಮಾನ ಮಾಡಿರಬಹುದು. ಹೀಗೆ ಒಬ್ಬೊಬ್ಬರೂ ಫಸಲು ವಿಸ್ತರಿಸುವುದರಲ್ಲಿ ತೊಡಗಿದಾಗ ಇವರೆಲ್ಲರ ಪ್ರಯತ್ನದ ಫಲವಾಗಿ ಸರಬರಾಯಿಯ ಮೊತ್ತ ಬೇಡಿಕೆಗಿಂತ ಅತ್ಯಧಿಕವಾಗಬಹುದು. ಹೆಚ್ಚು ಫಸಲು ತೆಗೆಯಬೇಕೆಂದು ತಾವು ಪ್ರಯತ್ನಿಸಿದ್ದು ತಪ್ಪಾಯಿತೆನಿಸಿದಾಗ ಆ ಬಗ್ಗೆ ಕ್ರಮ ಕೈಗೊಂಡ ಎಷ್ಟೋ ವರ್ಷಗಳ ಅನಂತರವೇ ವಾಸ್ತವವಾಗಿ ಫಸಲನ್ನು ಇಳಿಸಲು ಸಾಧ್ಯ. ಫಸಲು ಇಳಿತವೂ ನಿರೀಕ್ಷೆಗಿಂತ ಅತಿಯಾಗಬಹುದು. ಹೀಗೆ ಬಿಡಿ ಉತ್ಪಾದಕರ ವೈಯಕ್ತಿಕ ತೀರ್ಮಾನಗಳು ಕೂಡ ಒಟ್ಟಿನಲ್ಲಿ ಚಕ್ರೀಯವಾಗಿ ಪರಿಣಮಿಸುತ್ತವೆ. ಇದರಿಂದ ರೈತರ ವರಮಾನಗಳಲ್ಲಿ ಅಸ್ಥಿರತೆ ಉಂಟಾಗುತ್ತದೆ. ಇದು ಹಿಂದೆ ಹೇಳಿದ ವಾರ್ಷಿಕ ಏರಿಳಿತಗಳಿಗಿಂತ ಹೆಚ್ಚು ತೀವ್ರವಾದ್ದು. ಈ ಪರಿಸ್ಥಿತಿಯನ್ನು ನಿವಾರಿಸಲು ಸರ್ಕಾರವೋ ಉತ್ಪಾದಕರ ಕೂಟವೋ ಮಾರಾಟ ಸಂಸ್ಥೆಯೋ ಮುಂದಾಗಿಯೇ ಮಾರುಕಟ್ಟೆಯ ಸ್ಥಿತಿಗತಿಗಳನ್ನು ವೀಕ್ಷಿಸಿ ಉತ್ಪಾದನ ಕಾರ್ಯವನ್ನು ನಿಯಂತ್ರಣಗೊಳಿಸುವುದು ಅವಶ್ಯವಾಗುತ್ತದೆ.

	ಇಡೀ ಕೃಷಿ ವ್ಯವಸ್ಥೆಗೇ ಸಂಬಂಧಿಸಿದಂತೆ ಕೆಲವು ವರ್ಷಗಳಿಗೊಮ್ಮೆ ಏರಿಳಿತಗಳು ಸಂಭವಿಸುತ್ತಿರುವುದುಂಟು. ಇವು ಕೃಷಿಗೆ ಸೀಮಿತವಲ್ಲ; ಇಡೀ ಅರ್ಥ ವ್ಯವಸ್ಥೆಯನ್ನೇ ವ್ಯಾಪಿಸಿರುತ್ತವೆ. ಸಾರ್ವತ್ರಿಕ ವ್ಯಾಪಾರ ಚಕ್ರದ ಪರಿಣಾಮವಾಗಿ ಇವು ಸಂಭವಿಸುತ್ತವೆ. ಬಂಡವಾಳ ವ್ಯವಸ್ಥೆಯಲ್ಲಿ ಉತ್ಕರ್ಷ-ಅವನತಿಗಳು ತಾಳ-ಲಯಬದ್ಧವಾಗಿ ಪದೇ ಪದೇ ಸಂಭವಿಸುತ್ತಿರುತ್ತವೆಯೆಂಬುದು ಒಂದು ಸಿದ್ಧಾಂತ. ಇದೊಂದು ನಿಯಮ. ಉತ್ಪತ್ತಿ, ವರಮಾನ, ಬೆಲೆ, ಉದ್ಯೋಗ-ಮುಂತಾದ ಎಲ್ಲವೂ ನಿಯತವಾಗಿ ಒಟ್ಟೊಟ್ಟಿಗೆ ವ್ಯತ್ಯಾಸವಾಗುತ್ತಿರುತ್ತವೆ. ಕೃಷಿ ಉತ್ಪನ್ನಗಳ ಏರಿಳಿತಗಳೇ ಸಾರ್ವತ್ರಿಕ ವ್ಯಾಪಾರ ಚಕ್ರಕ್ಕೆ ನಿಮಿತ್ತವಾಗುವುವೆಂಬುದು ಒಂದು ವಾದ. ಆದರೆ ಎಲ್ಲ ಕೃಷಿ ವಸ್ತುಗಳ ಉತ್ಪನ್ನವೂ ಒಂದೇ ಸಮಯದಲ್ಲಿ ಅಧಿಕವಾಗುವುದಿಲ್ಲ; ಅಥವಾ ಒಮ್ಮೆಗೇ ಇಳಿಯುವುದಿಲ್ಲ-ಎಂಬುದನ್ನು ಹಿಂದೆ ಹೇಳಲಾಗಿದೆ. ಫಸಲು ಹೆಚ್ಚಾದಾಗ ಹೆಚ್ಚು ವ್ಯವಹಾರ; ಕಡಿಮೆಯಾದಾಗ ಕಡಿಮೆ-ಎಂಬ ವಾದವೂ ಕಾಲದೇಶ ಭೇದವಿಲ್ಲದೆ ನಿಜವಾಗುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಹೆಚ್ಚು ಫಸಲಿನಿಂದ ರೈತನಿಗೆ ನಷ್ಟ ಸಂಭವಿಸುವುದೂ ಉಂಟು. ಅತ್ಯಂತ ಮುಂದುವರಿದ ದೇಶದಲ್ಲಿ ಕೈಗಾರಿಕೆಯ ಕಚ್ಚಾ ಸಾಮಗ್ರಿಯಲ್ಲಿ ಕೃಷಿ ವಸ್ತುಗಳ ಭಾಗ ಬಹಳ ಹೆಚ್ಚಿರುವುದಿಲ್ಲ. ಆದ್ದರಿಂದ ಅಲ್ಲಿ ಕೃಷಿ ಉತ್ಪನ್ನದ ಏರಿಳಿತಗಳಿಂದ ಸಾರ್ವತ್ರಿಕವಾಗಿ ಆರ್ಥಿಕ ಏರುತಗ್ಗುಗಳಾಗುವುವೆಂಬುದಾಗಿ ಹೇಳಲಾಗುವುದಿಲ್ಲ. ಮುಂದುವರಿಯದ ದೇಶಗಳಲ್ಲಿ ಕೃಷಿ ಉತ್ಪನ್ನದ ಸರಬರಾಯಿ ತಗ್ಗಿದಾಗ ಬೆಲೆಗಳು ಏರಿ ಆರ್ಥಿಕತೆಯೇ ಅಸ್ತವ್ಯಸ್ತವಾಗಬಹುದು.

	ವ್ಯಾಪಾರ ಚಕ್ರಗಳಿಗೆ ಕೃಷಿ ಉತ್ಪನ್ನದ ವರ್ತನೆ ಎಷ್ಟರಮಟ್ಟಿಗೆ ಕಾರಣ-ಎಂಬ ವಿಚಾರ ಹೇಗಾದರೂ ಇರಲಿ, ಸಾರ್ವತ್ರಿಕ ಬೆಲೆ ಏರಿಕೆ ಅಥವಾ ಇಳಿತಗಳಿಂದ ಕೃಷಿ ವರಮಾನಗಳ ಮೇಲೆ ಆಗುವ ತೀವ್ರ ಪರಿಣಾಮವನ್ನು ಈ ಲೇಖನದ ಆದಿಯಲ್ಲಿ ವಿವರಿಸಲಾಗಿದೆ. ಚಿಲ್ಲರೆ ಮಾರಾಟ ಬೆಲೆಯಲ್ಲಿ ಸಂಭವಿಸುವ ಇಳಿತವಿಡೀ ಉತ್ಪಾದಕನಿಗೆ ವರ್ಗವಾಗುವುದರಿಂದ ಆತನ ಬೆಲೆಯಲ್ಲಿ ಆಗುವವೆಲ್ಲ ಸೇಕಡವಾರು ಇಳಿತ ಹೆಚ್ಚು. ಕೈಗಾರಿಕೆಯಲ್ಲಿ ಬೇಡಿಕೆಯ ಏರಿಳಿತಗಳು ಹೆಚ್ಚು ತೀವ್ರವಾಗಿದ್ದರೂ ಅವನ್ನು ಎದುರಿಸಲು ಶೀಘ್ರವಾಗಿ ಉತ್ಪಾದನೆಯಲ್ಲಿ ಹೊಂದಾವಣೆ ಮಾಡಬಹುದು. ಆದರೆ ಅಷ್ಟೇ ಶೀಘ್ರವಾಗಿ ಕೃಷಿಯಲ್ಲಿ ಹೊಂದಾವಣೆ ಸಾಧ್ಯವಿಲ್ಲ. ಆದ್ದರಿಂದ ಕೃಷಿ ಕ್ಷೇತ್ರದಲ್ಲಿಯ ಅಸ್ಥಿರತೆ ತುಂಬ ತೀವ್ರವೆನಿಸಿದೆ; ಸರ್ಕಾರದ ಮಧ್ಯ ಪ್ರವೇಶ ಹೆಚ್ಚು ಅಗತ್ಯವಾಗುತ್ತದೆ.
(ನೋಡಿ- ಕೃಷಿ-ಮತ್ತು-ಸರ್ಕಾರ) 

	ಕೃಷಿ ಬೆಲೆಗಳ ಸ್ಥಾಯೀಕರಣ: ವ್ಯವಸಾಯವೇ ಪ್ರಧಾನವಾಗಿರುವ ಭಾರತದಂಥ ದೇಶದಲ್ಲಿ ಕೃಷಿ ಪದಾರ್ಥಗಳ ಬೆಳೆಗಳ ದೃಢತೆಯೇ ಆರ್ಥಿಕ ಸ್ಥಿರತೆಯ ಅಸ್ತಿವಾರವಾಗಿದೆ. ಅಸ್ಥಿರ ಬೆಲೆಗಳು ಅರ್ಥವ್ಯವಸ್ಥೆಯಲ್ಲಿಯ ವ್ಯಾಧಿಯ ಬಾಹ್ಯ ಲಕ್ಷಣಗಳಾದ್ದರಿಂದ ಮೂಲಭೂತವಾದ ವ್ಯಾಧಿಯನಿವಾರಣೆಯಿಂದ ಬೆಲೆಗಳ ಅಸ್ಥಿರತೆ ಬಹುತೇಕ ಕಡಿಮೆಯಾಗುವುದೆಂಬುದು ನಿಜವಾದರೂ ಭಾರತದ ಆರ್ಥಿಕತೆಯ ವಿಶಿಷ್ಟ ಸ್ವರೂಪದಿಂದಾಗಿ ಅನೇಕ ವೇಳೆ ಅಸ್ಥಿರ ಬೆಲೆಗಳಿಂದ ಸಾಮಾಜಿಕ ನೆಮ್ಮದಿಗೂ ಆರ್ಥಿಕ ಅಭಿವೃದ್ದಿಗೂ ಭಂಗ ಬರಬಹುದು. ಕೈಗಾರಿಕೆಯಲ್ಲಿ ಮುಂದುವರಿದ ರಾಷ್ಟ್ರಗಳಲ್ಲಿ ಕೂಡ ಕೃಷಿ ಬೆಲೆಗಳ ದೃಢತೆಯನ್ನು ಕಾಯ್ದುಕೊಳ್ಳಲು ಅನೇಕ ಕ್ರಮಗಳನ್ನು ಜಾರಿಗೆ ತಂದಿರುವುದುಂಟು. 

	ಕೃಷಿ ವಸ್ತುಗಳ ಬೆಲೆಗಳನ್ನು ಸ್ಥಾಯಿಕರಿಸುವ ಕ್ರಮಗಳು 1929ರಲ್ಲಿ ಅಮೆರಿಕದಲ್ಲಿ ಆರಂಭವಾಗಿ, ಇತ್ತೀಚೆಗೆ ಇತರ ರಾಷ್ಟ್ರಗಳಲ್ಲೂ ರೂಢಿಗೆ ಬಂದಿದೆ. ಧಾರಣೆಯ ಚಲನವಲನಗಳಲ್ಲಿ ಒಂದಂಶ ನಿರೀಕ್ಷಿತ; ಇನ್ನೊಂದಂಶ ಅನಿರೀಕ್ಷಿತ. ಉದಾಹರಣೆಗೆ ಭಾರತದಲ್ಲಿ ಅಕ್ಟೋಬರಿನಿಂದ ಮಾರ್ಚ್ ತನಕ ಸಾಗುವ ಧಾರಣೆಯ ಇಳಿತ ಅನಿರೀಕ್ಷಿತವಲ್ಲ. ಇಂಥ ಅನಿರೀಕ್ಷಿತ ಬದಲಾವಣೆಗಳನ್ನು ಸಮರ್ಪಕ ಪರಿಮಾಣದ ದಾಸ್ತಾನಿನ ವ್ಯವಸ್ಥೆಯಿಂದ ನಿವಾರಿಸಬಹುದು. ಅನಿರೀಕ್ಷಿತ ಪ್ರಾಕೃತಿಕ ಹಾಗೂ ರಾಜಕೀಯ ಕಾರಣಗಳಿಂದುಂಟಾಗುವ ಬದಲಾವಣೆಗಳ ಮಟ್ಟಿಗೆ ದಾಸ್ತಾನು ವ್ಯವಸ್ಥೆಯ ಜೊತೆಗೆ, ಬೆಲೆಗಳ ಏರಿಳಿತಕ್ಕೆ ಕನಿಷ್ಠ ಗರಿಷ್ಠ ಮಿತಿಗಳನ್ನು ಗೊತ್ತು ಪಡಿಸುವುದೂ ಅವಶ್ಯಕ. ಒಟ್ಟಿನಲ್ಲಿ ಈ ಧೋರಣೆಯಿಂದ ರೈತನ ಉತ್ಪನ್ನಕ್ಕೆ ಒಂದು ನ್ಯಾಯ ಬೆಲೆ ದೊರೆತು, ಅವನ ವರಮಾನದ ಅಸಂದಿಗ್ಧ ಪರಿಸ್ಥಿತಿ ಕಡಿಮೆಯಾಗಿ, ಅವನ ಉತ್ಪಾದಕನ ಶಕ್ತಿ ಹೆಚ್ಚುವಂತಾಗಬೇಕು.

	ಕೃಷಿಧಾರಣೆಗಳ ಸ್ಥಾಯಿಕರಣಕ್ಕೆ ಹಲವು ವಿಧಾನಗಳು ಆಚರಣೆಯಲ್ಲಿವೆ. ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಅನುರೂಪ ದರಗಳ (ಪ್ಯಾರಿಟಿ ಪ್ರೈಸಸ್) ತತ್ತ್ವದ ತಳಹದಿಯ ಮೇರೆಗೆ ರೈತರ ಉತ್ಪನ್ನಕ್ಕೆ ಕನಿಷ್ಠ ಬೆಲೆಗಳನ್ನು ನಿರ್ಧರಿಸಲಾಗುತ್ತದೆ. ಹಿಂದಣ ಹತ್ತು ವರ್ಷಗಳ ಅವಧಿಯಲ್ಲಿ ರೈತನ ಉತ್ಪನ್ನದ ಬೆಲೆಗೂ ಅವನು ಕೊಳ್ಳಬೇಕಾಗಿದ್ದ ವಸ್ತುಗಳ ಬೆಲೆಗೂ ನಡುವಣ ಸರಾಸರಿ ಪ್ರಮಾಣವನ್ನು ಮೂಲವಾಗಿಟ್ಟುಕೊಂಡು, ಎಲ್ಲ ಮುಖ್ಯ ಕೃಷಿ ವಸ್ತುಗಳಿಗೂ ವರ್ಷಕ್ಕೊಮ್ಮೆ ಬೆಲೆಗಳನ್ನು ನಿರ್ಧರಿಸಲಾಗುತ್ತದೆ. ಪೇಟೆಯ ಬೆಲೆಗಳು ಈ ಮಿತಿಗಿಂತ ಕಡಿಮೆಯಾದಾಗ ಕಮಾಡಿಟಿ ಕ್ರೆಡಿಟ್ ಕಾರ್ಪೊರೇಷನ್ ಎಂಬ ಸಂಸ್ಥೆಯ ಮೂಲಕ ಆ ಪದಾರ್ಥಗಳನ್ನು ಕೊಳ್ಳಲಾಗುತ್ತದೆ. ಅಲ್ಲದೆ ಕೃಷಿಯ ಸುಧಾರಣೆಗಾಗಿ ರೈತನಿಗೆ ಬೇರೆಬೇರೆ ರೀತಿಯ ಸಾಲಗಳನ್ನೂ ಸಹಾಯಧನಗಳನ್ನೂ ಕೊಡಲಾಗುತ್ತದೆ.

	ಬ್ರಿಟನ್, ನಾರ್ವೇ, ಸ್ವೀಡನ್‍ಗಳಲ್ಲಿ ರೈತವರ್ಗದ ಒಟ್ಟು ವರಮಾನವನ್ನು ರಕ್ಷಿಸುವ ಉದ್ದೇಶದಿಂದ ಕನಿಷ್ಠ ಬೆಲೆಗಳನ್ನು ಪ್ರತಿವರ್ಷವೂ ನಿರ್ಧರಿಸಲಾಗುತ್ತದೆ. ಆಸ್ಟ್ರೇಲಿಯ, ಬ್ರಜಿóಲ್, ಆರ್ಜೆಂಟೀನ ಮೊದಲಾದ ದೇಶಗಳಲ್ಲಿ ರೈತನ ಬೇಸಾಯದ ವೆಚ್ಚವನ್ನನುಸರಿಸಿ ಬೆಲೆಗಳನ್ನು ನಿಗದಿ ಮಾಡುತ್ತಾರೆ.

	ಭಾರತದಲ್ಲೂ ಈ ದಿಕ್ಕಿನಲ್ಲಿ ಪ್ರಯತ್ನಗಳು ನಡೆದಿವೆ. ಸ್ಥಾಯೀಕರಣದ ಒಂದು ವಿಧಾನವೆಂದರೆ ಬೆಲೆಗಳ ಸಂಪೂರ್ಣ ಹತೋಟಿ ಮತ್ತು ಪಡಿತರ ವ್ಯವಸ್ಥೆ. 1953ಕ್ಕೆ ಮುಂಚೆ ಭಾರತದಲ್ಲಿ ಇದು ವಿಶೇಷವಾಗಿ ಜಾರಿಯಲ್ಲಿತ್ತು. ಬೇಡಿಕೆಗೆ ತಕ್ಕಷ್ಟು ಸರಬರಾಯಿ ಇಲ್ಲದಾಗ ನಿಷ್ಪಕ್ಷಪಾತ ಹಂಚಿಕೆ ಅಗತ್ಯವಾಗುತ್ತದೆ. ಆದರೆ ತನ್ನ ಹೊಣೆಗಾರಿಕೆಯನ್ನು ನಿರ್ವಹಿಸಲು ಸರ್ಕಾರದ ಶ್ರಮ ಅಧಿಕ. ಜರೂರು ಸಮಯದಲ್ಲಿ ಇದು ಅನಿವಾರ್ಯವಾದರೂ ಸದಾ ಕಾಲದಲ್ಲೂ ಇದನ್ನು ನಡೆಸುವುದು ಕಷ್ಟ. ದಕ್ಷ ಪ್ರಾಮಾಣಿಕ ಸಿಬ್ಬಂದಿ ಇಲ್ಲದಾಗ ಇದು ಅನೈತಿಕ ವ್ಯವಹಾರಗಳಿಗೆ ಅವಕಾಶ ಕೊಡಬಹುದು. ಅರ್ಥವ್ಯವಸ್ಥೆಯ ಬೆಳವಣಿಗೆಗೆ ಇದರಿಂದ ಅಡಚಣೆ ಒದಗಬಹುದು. ಅಲ್ಲದೆ ಇದಕ್ಕೆ ತಗಲುವ ವೆಚ್ಚವೂ ಅಧಿಕ. ಇದನ್ನು ಸಮಾಜ ಹೊರಬೇಕಾಗುತ್ತದೆ. ಯುದ್ಧಕಾಲದಲ್ಲಿ ಭಾರತದಲ್ಲಿ ಜಾರಿಗೆ ಬಂದ ಪಡಿತರ ವ್ಯವಸ್ಥೆ ಕ್ರಮಕ್ರಮವಾಗಿ ಸಡಿಲವಾಯಿತು.

	1954-56ರ ಅವಧಿಯಲ್ಲಿ ಬೆಲೆಗಳು ಕುಗ್ಗಿದಾಗ ಹಲವು ರಾಜ್ಯ ಸರ್ಕಾರಗಳು ಅಕ್ಕಿ, ಗೋಧಿ, ಜೋಳ ಮೊದಲಾದ ಆಹಾರ ಧಾನ್ಯಗಳ ಕನಿಷ್ಠ ಬೆಲೆಗಳನ್ನು ನಿರ್ಧರಿಸಿದುವು. 1956ರಿಂದೀಚೆಗೆ ಮತ್ತೆ ಬೆಲೆಗಳು ಏರುತ್ತ ಬಂದಾಗ ರೈತನಿಗೆ ಕನಿಷ್ಠಾವಧಿ ಬೆಲೆಯನ್ನು ನೀಡುವುದಕ್ಕಿಂತ, ಬೆಲೆಗಳ ಏರಿಕೆಯನ್ನು ಹಿಡಿತದಲ್ಲಿರಿಸುವ ಸಮಸ್ಯೆ ಪ್ರಮುಖವಾಯಿತು. ಬೆಲೆಗಳ ಸ್ಥಾಯೀಕರಣವನ್ನು ಸಾಧಿಸಲು ಅನುಸರಿಸಬಹುದಾದ ಇನ್ನೊಂದು ಕ್ರಮವೆಂದರೆ ಕಾಪು ದಾಸ್ತಾನು ವ್ಯವಹಾರ. ಅಶೋಕ ಮೆಹ್ತಾ ಅಧ್ಯಕ್ಷತೆಯಲ್ಲಿ ನೇಮಕವಾಗಿದ್ದ ಆಹಾರಧಾನ್ಯ ವಿಚಾರಣಾ ಸಮಿತಿ ಇದರ ಉದ್ದೇಶವನ್ನು ವಿವರಿಸಿದೆ. ನಿರ್ಧರಿಸಲಾದ ಬೆಲೆಮಟ್ಟದಿಂದ ಕೆಳಕ್ಕೆ ಬೆಲೆಗಳು ಇಳಿಯುವ ಪ್ರವೃತ್ತಿ ತೋರಿದಾಗ ಸಂಬಂಧಪಟ್ಟ ಸ್ಥಳದಲ್ಲಿ ಆ ಪದಾರ್ಥಗಳನ್ನು ಪ್ರಕಟಿತ ಬೆಲೆಗಳಿಗೆ ಕೊಂಡು ಬೆಲೆಗಳ ಪತನವನ್ನು ನಿಲ್ಲಿಸುವುದೂ ಬೆಲೆಗಳು ಏರಿದಾಗ ಅವನ್ನು ಪ್ರಕಟಿತ ಬೆಲೆಯಲ್ಲಿ ದಾಸ್ತಾನಿನಿಂದ ಮಾರುವುದೂ ಇದರ ಮುಖ್ಯ ಕ್ರಮ. ಈ ವಹಿವಾಟುಗಳನ್ನು ನಡೆಸಲು ಪ್ರತ್ಯೇಕ ಸಂಸ್ಥೆ ಇರುವುದು ಆವಶ್ಯಕ. ಭಾರತದ ಆಹಾರ ಕಾರ್ಪೋರೇಷನ್ ಈ ಕಲಾಪಗಳನ್ನು ಈಚೆಗೆ ಯಶಸ್ವಿಯಾಗಿ ನಿರ್ವಹಿಸಿ ಆಹಾರಧಾನ್ಯ ಬೆಲೆಗಳ ಸ್ಥಿರತೆ ಸಾಧಿಸುತ್ತಿದೆ. ಪರದೇಶಗಳಿಂದ ಆಹಾರಧಾನ್ಯಗಳನ್ನು ತರಿಸಿಕೊಂಡೊ ಆಂತರಿಕವಾಗಿ ಧಾನ್ಯ ಸಂಗ್ರಹ ಮಾಡಿಯೂ ಅವಶ್ಯವಾದ ಕಾಪು ದಾಸ್ತಾನು ನಿರ್ಮಿಸಲಾಗಿದೆ. ಇದನ್ನು ಸಮರ್ಪಕವಾಗಿ ನಿರ್ವಹಿಸಲು ಅಧಿಕ ಬಂಡವಾಳ ಬೇಕಾಗುತ್ತದೆ. ದಾಸ್ತಾನು ಮಳಿಗೆಗಳನ್ನು ನಿರ್ಮಿಸುವುದು ಆವಶ್ಯಕ. ದಕ್ಷ ಸಿಬ್ಬಂದಿಯದು ಇನ್ನೊಂದು ಸಮಸ್ಯೆ. ಕನಿಷ್ಠ-ಗರಿಷ್ಠ ಬೆಲೆಗಳನ್ನು ನಿರ್ಧರಿಸುವುದೂ ಸುಲಭವಲ್ಲ. ಈ ಎಲ್ಲ ಇತಿಮಿತಿಗಳಿದ್ದರೂ ಪ್ರಸ್ತುತ ಸ್ಥಿತಿಯಲ್ಲಿ ಭಾರತದಲ್ಲಿ ಆಹಾರಧಾನ್ಯ ಬೆಲೆಗಳ ಸ್ಥಾಯಿಕರಣ ಸಾಧಿಸಲು ಇದೊಂದು ಒಳ್ಳೆಯ ವಿಧಾನವಾಗಿದೆ.

	ದೀರ್ಘಕಾಲದಲ್ಲಿ ಬೆಲೆಗಳ ದೃಢತೆ ಸಾಧಿಸಬೇಕಾದರೆ ಉತ್ಪಾದನೆಯನ್ನೇ ಹೆಚ್ಚಿಸುವುದೂ ಕೃಷಿವಸ್ತುಗಳ ಸಮರ್ಪಕ ಮಾರಾಟ ವ್ಯವಸ್ಥೆಯನ್ನು ನಿರ್ಮಿಸುವುದೂ ರೈತನಿಗೆ ಅಗತ್ಯವಾದ ಧನಪೋಷಣೆ ನೀಡುವುದೂ ಅವಶ್ಯವಾಗುತ್ತದೆ. ಈ ನಿಟ್ಟಿನಲ್ಲಿ ವ್ಯಾಪಕವಾದ ಪ್ರಯತ್ನಗಳು ಭಾರತದಲ್ಲಿ ಜರುಗುತ್ತಿವೆ.							(ಎನ್.ಎಸ್.ಬಿ.)
									(ಪರಿಷ್ಕರಣೆ: ಡಾ.ಟಿ.ಎನ್.ಪ್ರಕಾಶ್)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ